ಇತಿಹಾಸ

ಮಧೂರು ದೇವಾಲಯದ ಭವ್ಯತೆಯ ಕುರಿತು ಹಲವಾರು ಪುರಾಣ ಕಥೆಗಳಿವೆ. ಭಾರ್ಗವ ರಾಮನು ಶ್ರೀ ವಿಘ್ನೇಶ್ವರನನ್ನು ಪ್ರತಿಷ್ಠಿಸಿ ಪೂಜೆಗೈದವನೆಂದು ಬ್ರಹ್ಮಾಂಡ ಪುರಾಣ ಹೇಳುತ್ತಿದೆ. ಸ್ಕಂದ ಪುರಾಣ ಹೇಳುವಂತೆ, ದ್ರಾವಿಡ ರಾಜ್ಯದ ತ್ರಿಗರ್ತದ ಅರಸ ಧರ್ಮಗುಪ್ತನು ವಾಸುಕಿಯ ನಿರ್ದೇಶನದಂತೆ ಕಾಶ್ಮೀರಾ ನದಿಯ ತೀರದಲ್ಲಿ ಭಿತ್ತಿಯೊಂದರ ಮೇಲೆ ಮಹಾಗಣಪತಿಯ ಚಿತ್ರವೊಂದನ್ನು ಬರೆದನು. ಮಹಾರುದ್ರಯಾಗವನ್ನು ನಿರ್ವಹಿಸುವಲ್ಲಿ ಬರಬಹುದಾದ ವಿಘ್ನಗಳ ನಿವಾರಣೆಗಾಗಿ ಪ್ರಾರ್ಥಿಸುವುದು ಆತನ ಉದ್ಧೇಶವಾಗಿತ್ತು. ಅನಂತರ ಆ ಭಿತ್ತಿಯ ಸುತ್ತಲೂ ಒಂದು ದೇವಾಲಯವನ್ನು ಕಟ್ಟಿಸಿ, ಶ್ರೀಮದನಂತೇಶ್ವರ ಲಿಂಗವನ್ನು ಅಲ್ಲಿ ಪ್ರತಿಷ್ಠಿಸಿದನು.

೧೦ ನೇ ಶತಮಾನದಲ್ಲಿ ಈ ದೇವಾಲಯವು ಕುಂಬಳೆಯ ಮಾಯಿಪ್ಪಾಡಿ ಅರಸರ ಅಡಳಿತಕ್ಕೊಳಪಟ್ಟಿದ್ದು, ೧೫ ನೇಶತಮಾನದಲ್ಲಿ ಸಧ್ಯದ ರೂಪಕ್ಕೆ ನವೀಕರಿಸಲ್ಪಟ್ಟಿತು. ಹಿಂದೂ ಹಾಗೂ ಜೈನ ವಾಸ್ತುಕಲೆಗಳ ವಿಲಕ್ಷಣ ಸಂಗಮವಾದ ಈ ಭವ್ಯ ದೇವಾಲಯವು ಭಕ್ತರನ್ನಲ್ಲದೆ, ವಾಸ್ತು ಕಲಾರಸಿಕರನ್ನು ಆಕರ್ಷಿಸುತ್ತಿದೆ. 'ಕಾಸರಗೋಡು, ದೇವರನಾಡು' (Kasaragod, the Land of Gods) ಎಂಬ ಕೃತಿಯಲ್ಲಿ ಮಧೂರು ದೇವಸ್ಥಾನದ ಕುರಿತಾದ ಅಧ್ಯಾಯದಲ್ಲಿ ಕರ್ತೃ ಶ್ರೀ ಬಿ.ಎಸ್.ಕಕ್ಕಿಲ್ಲಾಯರು ಹೀಗೆ ಹೇಳುತ್ತಾರೆ:

"ಮಧೂರು ದೇವಳವು ಕ್ರಿ.. ೬ ನೆಯ ಶತಮಾನದ ಅಡೂರು ದೇವಳದಷ್ಟೆ ಅಥವಾ ಅದಕ್ಕಿಂತಲೂ ಪ್ರಾಚೀನವಾದ ದೇವಾಯವಾಗಿದ್ದು , ಎರಡೂ ದೇವಾಲಯಗಳೂ ಏಕರೂಪದ ಮಹಾಪ್ರಸಾದ ಗಜಪೃಷ್ಠ ವಾಸ್ತುವಿನ್ಯಾಸದಲ್ಲಿದೆ. ಕೇರಳ ದೇಶದ ಮೇಲೆ ದಂಡೆತ್ತಿ ಹೋಗಿ ಲೂಟಿ ಮಾಡಿ ಪಯಸ್ವಿನೀ ನದಿಯ ತೀರದಲ್ಲಿ ಬೀಡುಬಿಟ್ಟಿದ್ದ ಮಧುರೆಯ ಪಾಂಡ್ಯರಾಜನ ಸೇನೆಯನ್ನು ಒಂದನೇ ಜಯಸಿಂಹನು (೧೦ ನೇ ಶತಮಾನ) ಯುದ್ಧದಲ್ಲಿ ಸೋಲಿಸಿ ನೆಟ್ಟ ವೀರಕಲ್ಲು ಇಂದಿಗೂ ಮಧೂರು ದೇವಸ್ಥಾನದ ಹೊರ ಪ್ರಾಕಾರದ ಈಶಾನ್ಯ ದಿಕ್ಕಿನಲ್ಲಿ ಹೆಮ್ಮೆಯಿಂದ ನಿಂತಿದೆ. ತಾವರೆಕೊಳ (ಈಗ ತಳಂಗರ)ದಲ್ಲಿರುವ ಶಿಲಾಶಾಸನವನ್ನು ಉಲ್ಲೇಖಿಸುವುದು ಇಲ್ಲಿ ಅಗತ್ಯ. ಇದು ಈ ದೇವಳದ ಪ್ರಾಚೀನತೆಗೆ ಸಾಕ್ಷಿಯಾಗಿದೆ. 1971ರಲ್ಲಿ ದೇವಳಕ್ಕೆ ಭೇಟಿ ನೀಡಿದ ಕೇರಳದ ಸಾಂಪ್ರದಾಯಿಕ ಜಾನಪದ ವಾಸ್ತುಶಿಲ್ಪದ ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ ಅಮೇರಿಕಾದ ಮಿಸ್ಸೋರಿ ವಿಶ್ವವಿದ್ಯಾಲಯದಿಂದ ಎಂ..ಪಿ.ಹೆಚ್.ಡಿ. ಪದವೀಧರನಾದ ಡಾ.ವಿಲಿಯಂ ಎ. ನೊಬೆಲ್ ಹೀಗೆ ಹೇಳುತ್ತಾರೆ. "ಇದು ಬಹುಷಃ ಜಗತ್ತಿನ ಏಕಮಾತ್ರ ಮೂರು ಅಂತಸ್ತಿನ ಗಜಪೃಷ್ಠ ದೇವಾಯವಾಗಿದ್ದು, ಯಾವನೇ ಪ್ರಭಾವಿ ಹಿಂದೂ ಇದನ್ನು ಕೆಡವಿ, ಅಲ್ಲಿ ಸದಭಿರುಚಿ ರಹಿತವಾದ ಕಾಂಕ್ರೀಟ್ ಕಟ್ಟಡವನ್ನು ನಿರ್ಮಿಸುವುದಿಲ್ಲವೆಂದು ಆಶಿಸುತ್ತೇನೆ. ಹಳೆಯ ವಿನ್ಯಾಸದ, ಪುರಾತ ವಾಸ್ತುಶಿಲ್ಪದ ಈ ಕಟ್ಟಡಗಳು ಸುರಕ್ಷಿತವಾಗಬೇಕು. ಕೇರಳದ ಹಿಂದೂಗಳು ಹಳೆಯ ಮೌಲ್ಯಗಳನ್ನು ಒಪ್ಪಿಕೊಂಡರೆ ಒಳಿತು. ಆದರೆ ದುರ್ದೈವವಶಾತ್ ಪ್ರಾಚೀನ ಅಭಿರುಚಿಗಳು ಬದಲಾಗಿ, ಹೊಸ ಥಳಕಿನ ಅಭಿರುಚಿಗಳು ಬರುತ್ತಿವೆ. ಹಳೆಯ ಮೌಲ್ಯಗಳನ್ನು ದಯವಿಟ್ಟು ಸಂರಕ್ಷಿಸಿ".

ಈ ದೇವಾಲಯದ ಐತಿಹ್ಯ, ಹಲವಾರು ಅರಸರ, ಅದರಲ್ಲೂ ಕುಂಬಳೆಯ ಅರಸ ಒಂದನೇ ಜಯಸಿಂಹನ ಐತಿಹ್ಯದೊಂದಿಗೆ ಬೆಸೆದಿದೆ. ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದಂತೆಯೂ ಒಂದು ಕತೆಯಿದೆ. ತನ್ನ ದಿಗ್ವಿಜಯಗಳ ಸರಣಿಯಲ್ಲಿ ಟಿಪ್ಪು, ಮಧೂರು ದೇವಸ್ಥಾನವನ್ನು ನೆಲಸಮ ಮಾಡುವ ಉದ್ದೇಶದಿಂದ ಆಲ್ಲಿಗೂ ಬಂದಿರುವ ಸೂಚನೆಯಿದೆ. ಬಾಯಾರಿದ ಟಿಪ್ಪು ದೇವಳದ ಬಾವಿಯ ನೀರನ್ನು ಕುಡಿದು, ಸ್ವಲ್ಪಕಾಲ ವಿರಮಿಸಿದ ಬಳಿಕ ದೇವಳವನ್ನು ಕೆಡಹುವ ಆಲೋಚನೆಯನ್ನು ಕೈಕೊಟ್ಟು ಹೊರಟರೂ, ತನ್ನ ಆಕ್ರಮಣದ ಸಂಕೇತವಾಗಿ ಖಡ್ಗದಿಂದ ಛಾವಣಿಯನ್ನು ಹೊಡೆದಿದ್ದು, ಆ ಗುರುತು ಈಗಲೂ ಮೇಲ್ಛಾವಣಿಯಲ್ಲಿ ಸುರಕ್ಷಿತವಿದೆ.