ಐತಿಹ್ಯಗಳು

ಮಧೂರು ದೇವಸ್ಥಾನದ ಪ್ರಾಚೀನತೆ ಮತ್ತು ಪ್ರತಿಷ್ಠೆಯ ಕುರಿತು ವಿವಿಧ ಮಾಹಿತಿಗಳು ಲಭಿಸುತ್ತವೆ. ಬ್ರಹ್ಮಾಂಡ ಪುರಾಣದಲ್ಲಿ ಭಾರ್ಗವ ರಾಮನು ಮಧುಪುರಿಯಲ್ಲಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿದನು ಎಂದಿದೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ;ತ್ರೈಗರ್ತ ದ್ರಾವಿಡ ದೇಶದ ಧರ್ಮಗುಪ್ತ್ ನೆಂಬ ಅರಸನು ತಾನು ನಡೆಸಿದ ಮಹಾರುದ್ರಯಾಗಕ್ಕೆ ಒದಗಿದ ವಿಘ್ನವನ್ನು ನಿವಾರಿಸಲು ವಾಸುಕಿಯ ಸಲಹೆಯಂತೆ ಕಾಶ್ಮೀರ ನದಿತೀರದಲ್ಲಿ ಮಹಾಗಣಪತಿಯ ಭಿತ್ತಿಚಿತ್ರವನ್ನು ಬರೆದು ಅದರ ಸುತ್ತಲೂ ಆಲಯವನ್ನು ನಿರ್ಮಿಸಿ ಶ್ರೀಮದನಂತೇಶ್ವರನ ಲಿಂಗವನ್ನು ಪ್ರತಿಷ್ಟೆ ಮಾಡಿಸಿದನೆಂಬ ಉಲ್ಲೇಖವಿದೆ. ಇನ್ನೊಂದು ಐತಿಹ್ಯದಂತೆ,ಪಾರ್ವತಿ ಅಮ್ಮನೆಂಬ ಬ್ರಾಹ್ಮಣ ಮಹಿಳೆಯೋರ್ವಳು ಕಡುಶರ್ಕರ ಪಾಕದಿಂದ ತನ್ನ ಆರಾಧನಾ ಮೂರ್ತಿಯಾದ ಕುಟಚಾದ್ರಿಯ ಷಡಕ್ಷರಿ ಗಣಪತಿ ವಿಗ್ರಹವನ್ನು ನಿರ್ಮಿಸಿ ಪೂಜಿಸಿದಳು ಎಂದು ಹೇಳಲಾಗುತ್ತಿದೆ. ಎಲ್ಲರಿಗೂ ತಿಳಿದಿರುವ ಜನಪದದ ಕಥೆಯ ಪ್ರಕಾರ:ಅನಾದಿಕಾಲದಲ್ಲಿ ಕುಳೋವುತಡ್ಕ (ಉಳಿಯತಡ್ಕ) ದಲ್ಲಿ ಮದರು ಎಂಬ ಮೊಗೇರ ಜಾತಿಯ ಮಹಿಳೆಯು ಕಾಡಿನಲ್ಲಿ ಗೆಡ್ಡೆಗಳನ್ನು ಅಗೆಯುತ್ತಿದ್ದಾಗ ಅವಳ ಕತ್ತಿಯು ಶಿವಲಿಂಗವೊಂದಕ್ಕೆ ತಾಗಿ ರಕ್ತ ಹರಿಯಿತೆಂದೂ ಆ ಶಿವಲಿಂಗವನ್ನೇ ಪುರಾತನ ದೇವಾಲಯದ ಕುರುವುಗಳಿದ್ದು ಕಾಶ್ಮೀರ ನದಿ ತೀರದಲ್ಲಿ ಪ್ರತಿಷ್ಠಾಪಿಸಿದರೆಂದೂ ಮದರುವಿನಿಂದ ಮುಂದೆ ಈ ಪ್ರದೇಶವು ಮಧೂರು ಆಯಿತೆಂದೂ ನಂಬಲಾಗುತ್ತಿದೆ.