ದೇವಸ್ಥಾನದ ಬಗ್ಗೆ

ಕುಂಬಳೆ ಸೀಮೆಯ ಅಡೂರು, ಮಧೂರು, ಕಾವು, ಕನ್ಯಾರ(ಕಣಿಪುರ)ಗಳ ದೇವಾಲಯಗಳು ಅತ್ಯಂಯ ಪುರಾತನವಾಗಿದ್ದು , ತಮ್ಮ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಗಳಿಂದ ಶ್ರದ್ಧಾಕೇಂದ್ರಗಳೆನಿಸಿವೆ.


ಕಾಸರಗೋಡಿನಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಸುಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನವು ಮಧೂರಿನಲ್ಲಿದೆ. ನಿಸರ್ಗರಮಣೀಯ ಬೆಟ್ಟಗಳ ಭತ್ತದ ಗದ್ದೆಗಳ ಹಾಗೂ ತೋಟಗಳ ಹಿನ್ನೆಲೆಯಿಂದ ಭವ್ಯವಾಗಿ ತಲೆಯೆತ್ತಿ ನಿಂತಿರುವ ಈ ದೇವಾಯದ ಮುಂಭಾಗದಲ್ಲಿ ಮಧುವಾಹಿನಿಯು ನಿಧಾನಗತಿಯಿಂದ ಹರಿಯುತ್ತಿದ್ದಾಳೆ. ಗಜಪೃಷ್ಠದ ಆಕಾರದಲ್ಲಿರುವ ಮೂರು ಅಂತಸ್ತುಗಳ ಈ ಮಂದಿರವು ಹಚ್ಚಹಸುರಿನ ಬಯಲಿನ ಮಧ್ಯೆ ಇದ್ದು, ಇಕ್ಕೆಲಗಳಲ್ಲಿ ಹಾಗೂ ಹಿನ್ನೆಲೆಯಲ್ಲಿ ಬೆಟ್ಟ ಹಾಗೂ ಕಣಿವೆಗಳಿದ್ದು, ಮುಂಭಾಗದಲ್ಲಿ ಮಧುವಾಹಿನಿಯು ನಿಧಾನಗತಿಯಿಂದ ಹರಿಯುತ್ತಿದ್ದಾಳೆ. ಪ್ರಥಮ ನೋಟದಲ್ಲೆ, ಭಕ್ತರ ಮನದಾಳದಲ್ಲಿ ಧರ್ಮನಿಷ್ಠೆಯನ್ನು ಉಕ್ಕಿಸುವ ಶಕ್ತಿ ಈ ದೇಗುಲಕ್ಕಿದೆ. ಪುರಾತನ ತುಳುನಾಡಿನ ಆರು ಗಣಪತಿ ಕ್ಷೇತ್ರಗಳಲ್ಲಿ  ಇದು ಅತ್ಯಂತ ಪ್ರಸಿದ್ಧವಾಗಿದೆ. ಅನಂತೇಶ್ವರ ದೇವರ ವಿಗ್ರಹ (ಶಿವಲಿಂಗ)ವು ಉದ್ಭವಮೂರ್ತಿಯಾಗಿದ್ದು, ಗಣಪತಿ ವಿಗ್ರಹವು ಗರ್ಭಗೃಹದ ಗೋಡೆಯ ಅಖಂಡ ಭಾಗವಾಗಿದೆ. ಮಧೂರು ದೇವಳದ ಪ್ರಧಾನ ದೇವತೆ ಅನಂತೇಶ್ವರನಾಗಿದ್ದರೂ, ದೇವಳವು ಪ್ರಸಿದ್ಧಿಗೆ ಪಾತ್ರವಾದದ್ದು ಸರ್ವವಿಘ್ನ ನಿವಾರಕನಾದ ಮಹಾಗಣಪತಿಯಿಂದಲೆ ಸರಿ. ಈ ದೇವಸ್ಥಾನದಲ್ಲಿ ಕಾಶಿ ವಿಶ್ವನಾಥ, ಹಂಸರೂಪಿ ಸದಾಶಿವ, ಶ್ರೀ ಧರ್ಮಶಾಸ್ತಾ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ವೀರಭದ್ರರಿಗಾಗಿ ಪ್ರತ್ಯೇಕ ಗುಡಿಗಳಿವ.