ನವೀಕರಣದ ಕುರಿತು


ಕೆಲವು ಶತಮಾನಗಳ ಹಿಂದೆ ನಿರ್ಮಾಣಗೊಂಡ ಈ ಪೂರ್ವ ದೇವಾಲಯವು ಕಾಲದ ಹೊಡೆತಕ್ಕೆ ಸಿಲುಕಿ ಈಗ ಜೀರ್ಣಾವಸ್ಥೆಗೆ ತಲುಪಿದೆ. ಕಳೆದ ಕೆಲವು ವರ್ಷಗಳಿಂದ ಈ ದೇವಾಲಯವನ್ನು ನಮೀಕರಿಸಲು ಪ್ರಯತ್ನಗಳು ಸಾಗಿದ್ದು,ಕೇರಳ ಸರಕಾರದ ಮಲಬಾರ್ ದೇವಸ್ವಂ ಬೋರ್ಡ್, ಎಡನೀರು ಮಠಾಧೀಶ   ಶ್ರೀ  ಶ್ರೀ  ಶ್ರೀ  ಕೇಶವಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಮೀಕರಣ ಸಮಿತಿಯೊಂದನ್ನು ರೂಪೀಕರಿಸಿದೆ. ಈ ಸಮಿತಿಯ ನೇತೃತ್ವದಲ್ಲಿ ಭಕ್ತ ಜನರ ಸಹಕಾರದಿಂದ ಮತ್ತು ದೇವಸ್ವಂ ಬೋರ್ಡ್ ನ ಸಹಯೋಗದಿಂದ ಜೀರ್ಣಾದ್ಧಾರಕ್ಕೆ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ. ಸುಮಾರು   ೧೬ ಕೋಟಿ ರೂ   ವೆಚ್ಚ ತಗುಲುವ ಈ ಸಮಗ್ರ  ಯೋಜನೆಯನ್ನು ೩ ಹಂತಗಳಲ್ಲಿ ಅತಿ ಶೀಘ್ರ ಪೂರ್ಣಗೊಳಿಸುವ ಉದ್ದೇಶವನ್ನು ಸಮಿತಿಯು ಹೊಂದಿರುತ್ತದೆ. ದೇವರ ಅನುಗ್ರಹ ಮತ್ತು ಭಕ್ತ ಮಹನೀಯರ ಸಹಕಾರವೇ ಈ ಪುಣ್ಯಕಾರಕ್ಕೆ ಶ್ರೀರಕ್ಷೆಯಾಗಿದೆ.

ಮೊದಲ ಹಂತದ ಕಾಮಗಾರಿಗಳು
ಗರ್ಭಗುಡಿ (ಪ್ರಧಾನ ದೇಗುಲ): ಈಗಿರುವ ಬೃಹತ್ತಾದ ಅತಿ ಸುಂದರವಾದ ಪ್ರಧಾನ ದೇಗುಲವು ಸುಮಾರು ೬೫೦ ವರ್ಷಗಳ ಹಿಂದಿನ ಒಂದು ಅಪೂರ್ವ ಕಲಾಕೃತಿಯಾಗಿದೆ. ಇದರ ಆಧಾರ ಸ್ತಂಭಗಳೂ ಮೇಛ್ಛಾವಣಿಗಳು ಕೀರ್ತಿ ಮುಖಗಳೂ ಶಿಥಿಲವಾಗಿದ್ದು ಅದನ್ನು ನಮೀಕರಿಸಲೇ ಬೇಕಾಗಿದೆ. ಇದರ ಮೂಲ ಸ್ವರೂಪಕ್ಕೆ ಚ್ಯುತಿಬಾರದಂತೆ ಅದೇ ವಿನ್ಯಾಸ ಮತ್ತು ಅಳತೆಯಲ್ಲಿ ಈಗಿರುವ ದೇವಸ್ಥಾನದ ಪಡಿಯಚ್ಚಿನಂತೆ ನಿರ್ಮಿಸುವ ಯೋಜನೆಯನ್ನು ನಮೀಕರಣ ಸಮಿತಿಯು ಹಮ್ಮಿಕೊಂಡಿದೆ. ಈ ಕಾಮಗಾರಿಗಳು ಅತಿ ಸೂಕ್ಷ್ಮವೂ ಬೃಹತ್ತಾದುದೂ ಆದುದರಿಂದ ಇದಕ್ಕೆ ವಿಷೇಶ ಪರಿಣಿತಿಯೂ ತಾಂತ್ರಿಕ ಕೌಶಲ್ಯವೂ ಅಗತ್ಯವಾಗಿದ್ದು   ೪.೩೫ ಕೋಟಿ ರೂ  ಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಉಪದೇವತೇಗಳ ಗುಡಿಗಳು: ಪ್ರಧಾನ ಗರ್ಭಗುಡಿಯ ಸುತ್ತಲಿರುವ ಶ್ರೀ ಧರ್ಮ ಶಾಸ್ತಾರ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಹಂಸರೂಪಿ ಸದಾಶಿವ, ಶ್ರೀ ಕಾಶೀ ವಿಶ್ವನಾಥ ಗುಡಿಗಳ ಛಾವಣೆಗಳು (ಮಾಡು)ಶಿಥಿಲವಾಗಿದ್ದು ಹೊಸದಾಗಿ ಸಾಗುವಾನಿ ಮರ ಮತ್ತು ತಾಮ್ರದ ಮಾಡನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು,ಈ ಐದು ಗುಡಿಗಳ ನಿರ್ಮಾಣಕ್ಕೆ ಒಟ್ಟು  ೧.೫ ಕೋಟಿ ರೂ  ಗಳ ವೆಚ್ಚವನ್ನು ಅಂದಾಜಿಸಲಾಗಿದೆ.  

ನೈವೇದ್ಯ ಕೊಠಡಿ: ಈಗಿರುವ ನೈವೇದ್ಯ ಕೊಠಡಿಯು ಇಕ್ಕಟ್ಟಾಗಿರುವುದರಿಂದ ಇದನ್ನು  ವಿಸ್ತರಿಸಬೇಕಾದ ಅಗತ್ಯವಿದೆ. ಇದನ್ನು ಸಾಗುವಾನಿ ಮರ ಮತ್ತು ತಾಮ್ರದ ಮಾಡಿನಿಂದ ಪುನರ್ ನಿರ್ಮಿಸಲು ನಿರ್ಧರಿಸಿದ್ದು ಅಂದಾಜು ೩೯,೫೫,೦೦೦ ಗಳ ವೆಚ್ಚ ತಗಲಬಹುದು. ಹೀಗೆ ಮೊದಲ ಹಂತದ ನಮೀಕರಣ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ತಿಗೊಳಿಸಲು ನಿರ್ಧರಿಸಲಾಗಿದ್ದು ಒಟ್ಟು ೬.೨೫ ಕೋಟಿ ಗಳ ಖರ್ಚು ತಗಲಬಹುದು.

ಎರಡನೇ ಹಂತದ ನವೀಕರಣ ಕಾಮಗಾರಿಗಳು
"ಸುತ್ತ ಪೌಳಿ"ಗಳ ನವೀಕರಣ: ದೇವಾಲಯದ ಸುತ್ತು ಪೌಳಿಗಳು ಕೆಲವೆಡೆ ಶಿಥಿಲವಾಗಿವೆ. ಅವುಗಳನ್ನು ನವೀಕರಿಸಲು ಉದ್ದೇಶಿಸಲಾಗಿದ್ದು ಅದಕ್ಕೆ ಸುಮಾರು ೧೦ ಲಕ್ಷ ರೂ ಗಳ ವೆಚ್ಚವನ್ನು ಅಂದಾಜಿಸಲಾಗಿದೆ.

ರಾಜಗೋಪುರಗಳ ನಿರ್ಮಾಣ: ಕ್ಷೇತ್ರದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಸುತ್ತು ಗೋಪುರಗಳ ಹೊರಭಾಗದಲ್ಲಿ ಸುಂದರ ಕೆತ್ತನೆ ಕೆಲಸಗಳಿದೊಡಗೂಡಿದ ಕಲಾತ್ಮಕವಾದ ಶಿಲಸ್ತಂಭಗಳನ್ನೊಳಗೊಂಡ ಎರಡು ರಾಜಗೋಪುರಗಲನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.ಇದಕ್ಕೆ ೨ ಕೋಟಿ ರೂ ಗಳ ಖರ್ಚು ತಗಲಬಹುದಾಗಿದೆ.

ಪಾಕಶಾಲೆ,ಭೋಜನಶಾಲೆ, ಅತಿಥಿ ಗೃಹಗಳ ನಿರ್ಮಾಣ: ಮಧೂರು ಕ್ಷೇತ್ರವೂದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಒಂದು ಮಹಾ ಕ್ಷೇತ್ರವಾಗಿದ್ದು, ಭಕ್ತ ಜನರ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ಉಂಟಾಗಿರುವುದರಿಂದ ಈಗಿರುವ ಪಾಕ ಶಾಲೆಯು ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಅತ್ಯಧುನಿಕ ಸವಲತ್ತುಗಳನ್ನೊಳಗೊಂಡ ವಿಸ್ತಾರವಾದಪಾಕಶಾಲೆ ಮತ್ತು ಭೋಜನ ಶಾಲೆಗಳು ಅತ್ಯಗತ್ಯವಾಗಿದೆ ಮಾತ್ರವಲ್ಲ ದೂರದ ಊರುಗಳಿದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಕೊರತೆ ಎಂಬುದನ್ನು ಮನಗಂಡು, ವಿನೂತನ ವಾಸ್ತು ಶೈಲಿಯ ಸುಂದರವಾದ ಅತಿಥಿ ಗೃಹವನ್ನೂ ಒಳಗೊಡ ೨೦೦೦೦ ಚದರ ಅಡಿ ವಿಸ್ತಿರ್ಣದ ರಡು ಅಂತಸ್ತಿನ ಕಟ್ಟಡವೊಂದನ್ನು ಸುಮಾರು ೨.೨ ಕೋಟಿ ರೂ ಗಳ ವೆಚ್ಚದಲ್ಲಿ  ನಿರ್ಮಿಸಲು ಉದ್ದೇಶಿಸಲಾಗಿದೆ.

ಯಾಗಶಾಲೆ: ಶ್ರೀ ಕ್ಷೇತ್ರದಲ್ಲಿ ಪ್ರತ್ಯೇಕ ಯಾಗಶಾಲೆಯೊಂದರ ಅಗತ್ಯವಿದ್ದು ದೇವಾಲಯದ ದಕ್ಷಿಣ ಭಾಗದಲ್ಲಿ ಸುಮಾರು ೨೦ ಲಕ್ಷ ವೆಚ್ಚ ತಗಲುವ ಎಲ್ಲ ಸೌಕರ್ಯಗಳಿರುವ ಯಾಗಶಾಲೆಯು ನಿರ್ಮಾಣವಾಗಲಿದೆ.
 
ವೀರಭದ್ರ,ರಕ್ತೇಶ್ವರೀ ಗುಡಿಗಳು ಮತ್ತು ನಾಗಬನ
: ವೀರಭದ್ರವ ಗುಡಿಯು ಈಗ ಶ್ರೀ ಕ್ಷೇತ್ರದ ಹೊರವಲಯದಲ್ಲಿದ್ದು ಅದನ್ನು ಅಲ್ಲಿಂದ ಸ್ಥಳಾಂತರಿಸಿ ಪ್ರಧಾನ ದೇವಾಲಯದ ಪಕ್ಕದಲ್ಲಿ ಪ್ರತಿಷ್ಠಾಪಿಸಬೇಕಾಗಿದೆ. ರಕ್ತೇಶ್ವರೀ ಗುಡಿಯನ್ನು ನವೀಕರಿಸಲೂ ಶ್ರೀ ನಾಗಬನಕ್ಕೆ ಯೋಗ್ಯ ಸಂರಕ್ಷಣೆಯನ್ನೊದಗಿಸಲೂ ಅದರ ಪಾವಿತ್ರ್ಯವನ್ನು ಕಪಾಡಿಕೊಂಡು ಬರುವುದಕ್ಕೂ ತಿರ್ಮಾನಿಸಲಾಗಿದ್ದು ಈ ಕಾರ್ಯಗಳಿಗೆ ೧೦ ಲಕ್ಷ ರೂ ಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ.

ಮೂರನೆ ಹಂತದ ನವೀಕರಣ
ಕಲ್ಯಾಣ ಮಂಟಪ: ಶ್ರೀ ಕ್ಷೇತ್ರ ಮಧೂರಿನಲ್ಲಿ ಸುಮಾರು ೧೦೦೦ ಜನರಿಗೆ ಬೇಕಾದ ವ್ಯವಸ್ಥೆಗಳಿರುವ,ಭೋಜನ ಶಾಲೆಯನ್ನೊಳಗೊಂಡ ಮತ್ತು ವಾಹನ ನಿಲುಗಡೆ ಸೌಕರ್ಯವಿರುವ ನೂತನ ಕಲ್ಯಾಣಮಂಟಪವೊಂದನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು ಅದಕ್ಕೆ ೨ ಕೋಟಿ ೭೫ ಲಕ್ಷ ರೂ ಗಳಷ್ಟು ವೆಚ್ಚ ತಗಲಬಹುದು.

ವೇದಪಾಠ ಶಾಲೆ: ಶ್ರೀ ಕ್ಷೇತ್ರ ಮಧೂರಿನಲ್ಲಿ ಪ್ರತೀ ವರ್ಷವೂ ವೇದ ಪಾಠಶಾಲೆಯು ನಡೆದು ಬರುತ್ತಿದೆ. ಅದಕ್ಕೆ ಈಗ ಪ್ರತ್ಯೇಕ ಸ್ಥಳ ಸೌಕರ್ಯಗಳಿಲ್ಲದೆ ಗೋಪುರಗಳಲ್ಲಿಯೇ ತರಗತಿಗಳು ನಡೆಯುತ್ತಿವೆ. ಈ ತರಗತಿಗಳನ್ನು ನಡೆಸಲು ೧೦ ಲಕ್ಷ ರೂ ಗಳ ವೆಚ್ಚದಲ್ಲಿ ವೇದಪಾಠಶಾಲೆಯು ನಿರ್ಮಾಣ ವಾಗಲಿದೆ.

ತಂತ್ರಿಗಳ ವಸತಿ : ತಾಂತ್ರಿಕ ವರ್ಗದವರ ವಸತಿ ವ್ಯವಸ್ಥೆಗಾಗಿ ೭ ಲಕ್ಷ ರೂ ಗಳ ವೆಚ್ಚದಲ್ಲಿ ಕಟ್ಟಡವೊಂದರ ನಿರ್ಮಾಣ ಕಾರ್ಯವೂ ನಡೆಯಲಿರುವುದು.

ಯಾತ್ರಿವಿಹಾರ,ಬಸ್ಸು ತಂಗುದಾಣ ಮತ್ತು ವಾಣಿಜ್ಯ ಸಂಕೀರ್ಣ: ಈ ದೇವಸ್ಥಾನವನ್ನು ಸಂದರ್ಶಿಸುವ ಯಾತ್ರಾರ್ಥಿಗಳಿಗೆ ಇಲ್ಲಿ ಸ್ನಾನ ಗೃಹಗಳಾಗಲೀ ಇನ್ನಿತರ ಮೂಲಭೂತ ಸೌಕರ್ಯಗಳಾಗಲೀ ಇಲ್ಲದಿರುವುದರಿಂದ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಯಾತ್ರಾರ್ಥಿ ಕೇಂದ್ರ ಸುಸಜ್ಜಿತ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳಲಿವೆ. ಇದರ ಸಾಕಾರಕ್ಕೆ ಸುಮಾರು ೧.೫ ಕೋಟಿ ರೂ ಗಳಷ್ಟು ವೆಚ್ಚ ತಗಲಬಹುದು.
 
ನೆರೆಯಂತ್ರಣ, ಒಳಚರಂಡಿ ಮತ್ತು ಸ್ವಾಸ್ಥ್ಯ ವ್ಯವಸ್ಥೆಗಳು: ಮಳೆಗಾಲದಲ್ಲಿ ಶ್ರೀಕೇತ್ರದ ಆವರಣದಿಂದ ನೀರು ಸಮರ್ಪಕವಾಗಿ ಹರಿದುಹೋಗದೇ ಇರುವುದು ಒಂದು ಸಮಸ್ಯೆಯಾಗಿದ್ದು ಸರಿಯಾದ ಒಳಚರಂಡಿ ವ್ಯವಸ್ಥೆ ಮತ್ತು ನೆರೆ ನಿಯಂತ್ರಣಕ್ಕೆ ಯೋಜನೆಯೊಂದನ್ನು ರೂಪಿಸಬೇಕಾದುದು ಅತೀ ಅಗತ್ಯವಾಗಿದೆ. ದೇವಾಲಯದ ಪರಿಸರವನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದೂ ಅತೀ ಪ್ರಾಮುಖ್ಯವಾಗಿರುವುದರಿಂದ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸುಮಾರು ೧ ಕೋಟಿ ರೂ ಗಳಷ್ಟು ವೆಚ್ಚ ತಗಲಬಹುದು.