ಪ್ರಸ್ತುತ ನಡೆಯುತ್ತಿರುವ ನವೀಕರಣ ಕಾರ್ಯ

ಕಾಸರಗೋಡಿನ ಮಧೂರಿನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಸರ್ವ ವ್ಯಾಪಕನಾದ ಶ್ರೀ ಮಹಾಗಣಪತಿಯ ಪವಿತ್ರ ಸನ್ನಿಧಿ ಮಾತ್ರವಲ್ಲ, ದೇಶ ವಿದೇಶಗಳಿಂದ ಬರುವ ಲಕ್ಷಾಂತರ ಭಕ್ತಜನರ ಗಮ್ಯಸ್ಥಾನವಾಗಿದೆ. ಹಿಂದೂ ದೇವತೆಗಳ ಯಾದಿಯಲ್ಲಿ, ಶಿವ ಪಾರ್ವತಿಯರ ಸುತನಾದ ಗಜಮುಖನಾದ ಗಣಪತಿಯು ಅಗ್ರಸ್ಥಾನವನ್ನು ಪಡೆದಿದ್ದಾನೆ. ಗಣೇಶನು ಪರಬ್ರಹ್ಮ ಸ್ವರೂಪ ವಿದ್ಯೆ -ಬುದ್ಧಿಗಳ ದೇವತೆ, ವಿಘ್ನ ನಾಶಕ ಹಾಗೂ ಸರ್ವದೇವತೆಗಳಲ್ಲಿ ಪ್ರಥಮ ವಂದಿತ . ಇಂದು ಸಾವಿರಾರು ಭಕ್ತರು ತಮ್ಮ ಕರ್ಮಬಂಧಗಳಿಂದ  ಮುಕ್ತಿ ಹಾಗೂ ಕಲಿಯುಗ ಕೆಡುಕುಗಳಿಂದ ಸಾಂತ್ವನವನ್ನು ಬೇಡುತ್ತಾ ಮಧೂರು ಗಣಪತಿಯ ಚರಣಗಳಲ್ಲಿ ಶರಣಾಗುತ್ತಿದ್ದಾರೆ.


 ದುರಾದೃಷ್ಟವೆಂದರೆ ಮಧೂರು ದೇವಾಲಯದ ಈ ಸುಂದರ ಮಂದಿರವು ಕಾಲನ ಹಾವಳಿಗೆ ತುತ್ತಾಗಿ ದು:ಸ್ಥಿತಿಯಲ್ಲಿದೆ. ಈ ದೇವಾಲಯದ ನವೀಕರಣಕ್ಕೆ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬಾರಿ ಪ್ರಯತ್ನಿಸಿದರೂ, ಸಫಲವಾಗಲಿಲ್ಲ. ಆದರೆ ಇಂದು ಕಾಲ ಪರಿಪಕ್ವವಾಗಿದೆ. ಈ ದೇವಾಲಯವು ಕೇರಳ ಸರಕಾರದ ಮಲಬಾರ್ ದೇವಸ್ವಂ ಬೋರ್ಡಿನ ನೇರ ನಿಯಂತ್ರಣದಲ್ಲಿದ್ದು, ಬೋರ್ಡು ನವೀಕರಣ ಕಾರ್ಯಕ್ರಮವನ್ನು ಮಂಜೂರುಗೊಳಿಸಿದೆ. ಎಡನೀರು ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಮೇಲ್ವಿಚಾರಣೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ.  ಮೂರು ಹಂತಗಳಲ್ಲಿ ನವೀಕರಣ ಕಾರ್ಯವನ್ನು ಕೈಗೊಳ್ಳುವರೆ ದೇವಸ್ವಂ ಬೋರ್ಡಿನ ಹಾಗೂ ಭಕ್ತಾದಿಗಳ ಸಹಕಾರವನ್ನು ಕೋರುವಲ್ಲಿ ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸಮಿತಿಯು ಈಗಾಗಲೇ ಪ್ರಸಕ್ತ ನಿರ್ಮಾಣ ವೆಚ್ಚದ ದರದಲ್ಲಿ 16.27 ಕೋಟಿ ರೂ.ಗಳ ವೆಚ್ಚವನ್ನು ಅಂದಾಜು ಮಾಡಲಾಗಿ, ಬೋರ್ಡಿಗೆ ಸಲ್ಲಿಸಲಾಗಿದೆ.

ನವೀಕರಣವು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೆಯ ಹಂತದಲ್ಲಿ, ಗರ್ಭಗುಡಿ, ಉಪದೇವತೆಗಳ ಗುಡಿಗಳು, (ಶ್ರೀ ಧರ್ಮಶಾಸ್ತಾ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಹಂಸರೂಪಿ ಸದಾಶಿವ ಹಾಗೂ ಶ್ರೀ ಕಾಶಿ ವಿಶ್ವನಾಥ) ನವೀಕರಣ ನೂತನ ಭೋಜನ ಶಾಲೆ ಹಾಗೂ ನೈವೇದ್ಯದ ಕೋಣೆಗಳ ನಿರ್ಮಾಣ ನಡೆಯಲಿದೆ. ಎರಡನೆಯ ಹಂತದಲ್ಲಿ ಎರಡು ಹೊಸ ರಾಜಗೋಪುರಗಳ ಅತಿಥಿ ಮಂದಿರದ ಯಾಗಶಾಲೆಯ ವೀರಭದ್ರ ಹಾಗೂ ಸುತ್ತು ಪೌಳಿಯ ನವೀಕರಣ ಇತ್ಯಾದಿ ಕಾರ್ಯಗಳು ನಡೆಯಲಿವೆ. ಮೂರನೆಯ ಹಂತದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಕಲ್ಯಾಣ ಮಂಟಪ / ಸಭಾಗೃಹದ ನಿರ್ಮಾಣ, ತಂತ್ರಿಯವರ ವಿಶ್ರಾಂತಿ ಗೃಹ, ವೇದಪಾಠಶಾಲೆ, ವಾಣಿಜ್ಯ ಸಂಕೀರ್ಣ, ಬಸ್ಸು ನಿಲ್ದಾಣ, ವಿಶ್ರಾಂತಿ ಗೃಹಗಳು ಇತ್ಯಾದಿಗಳ ನಿರ್ಮಾಣ ಹಾಗೂ ನೆರೆ ನಿಯಂತ್ರಣ ಹಾಗೂ ಚರಂಡಿ ವ್ಯವಸ್ಥೆಗಳು ನಡೆಯಲಿವೆ. (ವಿವರಗಳಿಗೆ ಫೋಟೋ ಗ್ಯಾಲರಿ ನೋಡಿರಿ)