ಮೂರನೆ ಹಂತದ ನವೀಕರಣ

ಕಲ್ಯಾಣ ಮಂಟಪ: ಶ್ರೀ ಕ್ಷೇತ್ರ ಮಧೂರಿನಲ್ಲಿ ಸುಮಾರು ೧೦೦೦ ಜನರಿಗೆ ಬೇಕಾದ ವ್ಯವಸ್ಥೆಗಳಿರುವ,ಭೋಜನ ಶಾಲೆಯನ್ನೊಳಗೊಂಡ ಮತ್ತು ವಾಹನ ನಿಲುಗಡೆ ಸೌಕರ್ಯವಿರುವ ನೂತನ ಕಲ್ಯಾಣಮಂಟಪವೊಂದನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು ಅದಕ್ಕೆ ೨ ಕೋಟಿ ೭೫ ಲಕ್ಷ ರೂ ಗಳಷ್ಟು ವೆಚ್ಚ ತಗಲಬಹುದು. 
 
ವೇದಪಾಠ ಶಾಲೆ: ಶ್ರೀ ಕ್ಷೇತ್ರ ಮಧೂರಿನಲ್ಲಿ ಪ್ರತೀ ವರ್ಷವೂ ವೇದ ಪಾಠಶಾಲೆಯು ನಡೆದು ಬರುತ್ತಿದೆ. ಅದಕ್ಕೆ ಈಗ ಪ್ರತ್ಯೇಕ ಸ್ಥಳ ಸೌಕರ್ಯಗಳಿಲ್ಲದೆ ಗೋಪುರಗಳಲ್ಲಿಯೇ ತರಗತಿಗಳು ನಡೆಯುತ್ತಿವೆ. ಈ ತರಗತಿಗಳನ್ನು ನಡೆಸಲು ೧೦ ಲಕ್ಷ ರೂ ಗಳ ವೆಚ್ಚದಲ್ಲಿ ವೇದಪಾಠಶಾಲೆಯು ನಿರ್ಮಾಣ ವಾಗಲಿದೆ. 
 
ತಂತ್ರಿಗಳ ವಸತಿ : ತಾಂತ್ರಿಕ ವರ್ಗದವರ ವಸತಿ ವ್ಯವಸ್ಥೆಗಾಗಿ ೭ ಲಕ್ಷ ರೂ ಗಳ ವೆಚ್ಚದಲ್ಲಿ ಕಟ್ಟಡವೊಂದರ ನಿರ್ಮಾಣ ಕಾರ್ಯವೂ ನಡೆಯಲಿರುವುದು. 
 
ಯಾತ್ರಿವಿಹಾರ,ಬಸ್ಸು ತಂಗುದಾಣ ಮತ್ತು ವಾಣಿಜ್ಯ ಸಂಕೀರ್ಣ : ಈ ದೇವಸ್ಥಾನವನ್ನು ಸಂದರ್ಶಿಸುವ ಯಾತ್ರಾರ್ಥಿಗಳಿಗೆ ಇಲ್ಲಿ ಸ್ನಾನ ಗೃಹಗಳಾಗಲೀ ಇನ್ನಿತರ ಮೂಲಭೂತ ಸೌಕರ್ಯಗಳಾಗಲೀ ಇಲ್ಲದಿರುವುದರಿಂದ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಯಾತ್ರಾರ್ಥಿ ಕೇಂದ್ರ ಸುಸಜ್ಜಿತ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳಲಿವೆ. ಇದರ ಸಾಕಾರಕ್ಕೆ ಸುಮಾರು ೧.೫ ಕೋಟಿ ರೂ ಗಳಷ್ಟು ವೆಚ್ಚ ತಗಲಬಹುದು.
 
ನೆರೆಯಂತ್ರಣ, ಒಳಚರಂಡಿ ಮತ್ತು ಸ್ವಾಸ್ಥ್ಯ ವ್ಯವಸ್ಥೆಗಳು: ಮಳೆಗಾಲದಲ್ಲಿ ಶ್ರೀಕೇತ್ರದ ಆವರಣದಿಂದ ನೀರು ಸಮರ್ಪಕವಾಗಿ ಹರಿದುಹೋಗದೇ ಇರುವುದು ಒಂದು ಸಮಸ್ಯೆಯಾಗಿದ್ದು ಸರಿಯಾದ ಒಳಚರಂಡಿ ವ್ಯವಸ್ಥೆ ಮತ್ತು ನೆರೆ ನಿಯಂತ್ರಣಕ್ಕೆ ಯೋಜನೆಯೊಂದನ್ನು ರೂಪಿಸಬೇಕಾದುದು ಅತೀ ಅಗತ್ಯವಾಗಿದೆ. ದೇವಾಲಯದ ಪರಿಸರವನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದೂ ಅತೀ ಪ್ರಾಮುಖ್ಯವಾಗಿರುವುದರಿಂದ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸುಮಾರು ೧ ಕೋಟಿ ರೂ ಗಳಷ್ಟು ವೆಚ್ಚ ತಗಲಬಹುದು.