ವಾಸ್ತುಶಿಲ್ಪ

ಈ ದೇವಸ್ಥಾನದ ವಠಾರದ ವೈಶಾಲ್ಯ, ಧ್ವಜಸ್ತಂಭದ ವಿನ್ಯಾಸ, ಸುಂದರವಾದ ಕೆತ್ತನೆಯಿರುವ ದಾರಂದಗಳು, ಆ ಕಾಲದ ಕಲೆ ಹಾಗೂ ವಾಸ್ತುಕಲೆಯ ಶ್ರೀಮಂತಿಕೆಯ ದ್ಯೋತಕಗಳಾಗಿವೆ. ದೇವಸ್ಥಾನದ ಒಳಗೆ, ಮೇಲ್ಛಾವಣಿಗೆ ಆಸರೆಯಾಗಿ ನಿಂತ ಮರದ ಕಂಬಗಳು, ತಾಂತ್ರಿಕ ಕೌಶಲ್ಯ ಹಾಗೂ ವಿನ್ಯಾಸಕಾರರ ಕಾರ್ಯತ್ಪರತೆಗೆ ಉದಾಹರಣೆಗಳಾಗಿವೆ. ಅತ್ಯಂತ ಮೇಲಿನ ಅಂತಸ್ತಿನ ಹೊರಭಾಗದಲ್ಲಿರುವ ಕೆತ್ತನೆಗಳು ಅದರ ಕಲಾತ್ಮಕತೆಗೆ ಉತ್ಕೃಷ್ಟ ಪ್ರಮಾಣಗಳಾಗಿವೆ. ಇವುಗಳನ್ನು ಕೆಂಪುಕಲ್ಲು, ಗಾರೆ ಹಾಗೂ ಮರದಲ್ಲಿ ಕೆತ್ತಲಾಗಿದೆ. ಮೇಲ್ಛಾವಣಿಯಲ್ಲಿ ಪುತ್ರಕಾಮೇಷ್ಟಿ ಯಾಗದಿಂದ ಸೀತಾಸ್ವಯಂವರದವರೆಗಿನ ರಾಮಾಯಣದ ದೃಶ್ಯಗಳ ಮನೋಹರವಾದ ಮರದ ಕೆತ್ತನೆ ಕೆಲಸಗಳಿವೆ. ಈ ದೇವಾಲಯವು ವಾಸ್ತುಶಿಲ್ಪ, ಶಿಲ್ಪಕಲೆ ಮಾತ್ರವಲ್ಲದೆ ಪೌರಾಣಿಕ ಘಟನೆಗಳ, ಜಾನಪದ ಕಥನಗಳ ಒಂದು ಅಭೂತಪೂರ್ವ ಖಜಾನೆಯಾಗಿದ್ದು, ಮುಂದಿನ ತಲೆಮಾರುಗಳಿಗೋಸ್ಕರ ಸಂರಕ್ಷಿಸಲ್ಪಡಬೇಕಾಗಿದೆ. ವಿದೇಶೀ ತೀರ್ಥಾಟಕರ ಹೇಳಿಕೆಯ ಪ್ರಕಾರ ಇದು ಜಾಗತಿಕ ಮಟ್ಟದ ಯಾವುದೇ ಕಲಾಶಿಲ್ಪಗಳೊಂದಿಗೆ ಹೋಲಿಕೆಗೆ ಯೋಗ್ಯವಾಗಿವೆ. ಇದು ಕಲ್ಲಿನಲ್ಲಿ ಬರೆದ ಒಂದು ಕಾವ್ಯವೆ ಹೊರತು ಬರಿಯ ಮಂದಿರವಲ್ಲ.

ಈ ದೇವಳದ ಕಾಷ್ಠಶಿಲ್ಪವು ಅತ್ಯಪೂರ್ವ ಗುಣಮಟ್ಟದ್ದಾಗಿದೆ. ನಮಸ್ಕಾರ ಮಂಟಪದ ಛಾವಣಿಯು ಪೌರಾಣಿಕ ವೀರರ ಶಿಲ್ಪಗಳಿಂದ ಅಲಂಕರಿಸಲ್ಪಪಟ್ಟಿದೆ. ಈ ಶಿಲ್ಪಾಕೃತಿಗಳನ್ನು ಸಮೀಪದಿಂದ ಪರೀಕ್ಷಿಸಿ ನೋಡಿದಾಗ ಪುತ್ರಕಾಮೇಷ್ಠಿಯಾಗದಿಂದ ಆರಂಭಿಸಿ ಸೀತಾ ಸ್ವಯಂವರದಲ್ಲಿ ಕೊನೆಗೊಳ್ಳುವ ಘಟನೆಗಳನ್ನು ಘಟನೆಗಳನ್ನು ಕಾಣಬಹುದಾಗಿದೆ. ದೇವಳದ ಗರ್ಭಗುಡಿಯೊಳಗಿನ ಮಂಟಪ ಹಾಗೂ ಮುಖ್ಯಮಂದಿರದ ಎರಡನೆಯ ಹಾಗೂ ಮೂರನೆಯ ಅಂತಸ್ತುಗಳ ಮುಂಭಾಗವೂ ಅತಿ ಮನೋಹರವಾದ ಕಲ್ಲಿನ ಹಾಗೂ ಮರದ ಕೆತ್ತನೆಗಳಿಂದ ಕೂಡಿ ಶೋಭಿಸುತ್ತಿದೆ.

ಈ ದೇವಾಲಯಕ್ಕೆ ಮೂರು ಅಂತಸ್ತಿನ ಗೋಲಾಕಾರದ ಶಿಖರವಿದ್ದು ದೇವಾಯವು U ಆಕಾರದಲ್ಲಿದೆ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಹೊದಿಕೆಯ ಛಾವಣಿ ಇದ್ದು, ಅತ್ಯಂತ ಕೆಳಗಿನ ಅಂತಸ್ತಿಗೆ ಹೆಂಚು ಹೊದಿಸಲಾಗಿದೆ. ದೇವಾಯದ ಪರಿಸರದಲ್ಲಿರುವ ಅತಿ ಸೂಕ್ಷ್ಮ ಕೆತ್ತನೆಯಿರುವ ಮರದ ಕಂಬಗಳು ಹಾಗೂ ತೊಲೆಗಳು ಗತಕಾಲದ ಕಲಾಕಾರರ ಕೌಶಲ್ಯದ ಕತೆ ಹೇಳುತ್ತವೆ. ದೇವಳದ ಗೋಡೆಗಳು, ಛಾವಣಿಗಳು, ನಯವಾದ ಗಾರೆಯಲ್ಲಿ ಮೂಡಿದ ಭಾರತೀಯ ಪುರಾಣಗಳ ದೃಶ್ಯಗಳಿಂದ ಅಲಂಕೃತವಾಗಿವೆ. ದೇವಳದ ಪರಿಸರದಲ್ಲಿ ಆಳವಾದೊಂದು ಬಾವಿ ಇದೆ. ಸೂರ್ಯನ ಕಿರಣಗಳಿಂದ ಸ್ಪರ್ಶಿಸಲ್ಪಡದ ಈ ಬಾವಿಯ ನೀರಿಗೆ ರೋಗಶಮನದ ಗುಣಗಳಿವೆಯೆಂದು ನಂಬಲಾಗಿದೆ.