ಸಿದ್ಧಿವಿನಾಯಕ ಸೇವಾ ಸಂಘ

ಈ ದೇವಾಲಯವು 1962ರವರೆಗೆ ದುಸ್ಥಿತಿಯಲ್ಲಿತ್ತು. ಆಗಿನ ಅನುವಂಶಿಕ ಮೊಕ್ತೇಸರರಾಗಿದ್ದ ಮಾಯಿಪ್ಪಾಡಿಯ ಶ್ರೀ ವೆಂಕಟೇಶ ವರ್ಮರಾಜರು ಈ ದೇವಳವನ್ನು ನವೀಕರಿಸಲು ಬಯಸಿದರು. ಅವರು ಶ್ರೀ.ಬಿ.ಎಸ್.ಕಕ್ಕಿಲ್ಲಾಯರಿಗೆ ಅಧಿಕಾರ ಪತ್ರ ನೀಡುವುದರ ಮೂಲಕ ದೇವಳದ ದಿನನಿತ್ಯದ ಆಗುಹೋಗುಗಳ ಆಡಳಿತವನ್ನು ಅವರು ಹಸ್ತಾಂತರಿಸಿದರು. ಆನುವಂಶಿಕ ಮೊಕ್ತೇಸರರ ಅಧ್ಯಕ್ಷತೆಯಲ್ಲಿ ಭಕ್ತಜನರನ್ನು ಒಳಗೊಂಡ ಶ್ರೀ ಸಿದ್ಧಿವಿನಾಯಕ ಸೇವಾ ಸಂಘವನ್ನು ಸ್ಥಾಪಿಸಲಾಯಿತು. ಡಾ.ಕೆ.ಸಿ.ಆಳ್ವ ಶ್ರೀ ಖಂಡಿಗೆ ಶ್ಯಾಮಭಟ್ ಹಾಗೂ ಶ್ರೀ ಶಂಕರರಾವ್ ಇವರನ್ನು ಕ್ರಮವಾಗಿ ಉಪಾಧ್ಯಕ್ಷ, ಕೋಶಾಧ್ಯಕ್ಷ ಹಾಗೂ ಕಾರ್ಯದರ್ಶಿಗಳಾಗಿ ನಾಮ ನಿರ್ದೇಶನ ಮಾಡಲಾಯಿತು.

ಶ್ರೀ ಬಿ.ಎಸ್.ಕಕ್ಕಿಲ್ಲಾಯ ಹಾಗೂ ಶ್ರೀ ಸಿದ್ಧಿವಿನಾಯಕ ಸೇವಾಸಂಘದ ನೇತೃತ್ವದಲ್ಲಿ ದೇವಳದ ನವೀಕರಣವನ್ನು ನಡೆಸಲಾಯಿತು. ದುಸ್ಥಿತಿಯಲ್ಲಿದ್ದ, ಹಳೆಯ ಮುಳಿಮಾಡಿನ, ಉತ್ತರ ಗೋಪುರವನ್ನು ಕೆಡವಿ, ಸುಮಾರು ೨೦೦ ಅಡಿ ಉದ್ದ, ೨೫ ಅಡಿ ಅಗಲದ ಹಂಚು ಹೊದಿಸಿದ ಛಾವಣಿಯ ಹೊಸ ಗೋಪುರವನ್ನು ನಿರ್ಮಾಣ ಮಾಡಲಾಯಿತು. ಉಪದೇವತೆಗಳಾದ ಶ್ರೀ ಶಾಸ್ತಾ, ಶ್ರೀ ದುರ್ಗಾ, ಶ್ರೀ ಸುಬ್ರಹ್ಮಣ್ಯ, ಶ್ರೀ ದಕ್ಷಿಣಾಮೂರ್ತಿ ಹಾಗೂ ಶ್ರೀ ಸದಾಶಿವರಿಗೆ ನೂತನ ಗುಡಿಗಳು ನಿರ್ಮಾಣ ಗೊಂಡವು. ದೇವಳದ ಮುಂಭಾಗದಲ್ಲಿ ಈಶಾನ್ಯ ಭಾಗದಲ್ಲಿ ಈ ಉದ್ದೇಶಕ್ಕೆಂದೇ ವಶಕ್ಕೆ ತೆಗೆದುಕೊಂಡ ನಿವೇಶನದಲ್ಲಿ ಸುತ್ತಲೂ ಕಲ್ಲಿನಿಂದ ಕಟ್ಟಿದ ಸರೋವರವನ್ನು  ಅಣಿಗೊಳಿಸಲಾಯಿತು. ಸುತ್ತಲೂ ಆವರಣವನ್ನು ಕಟ್ಟಲಾಯಿತು. ಮಳೆಗಾಲದಲ್ಲಿ ಮಧುವಾಹಿನಿ ಮೇರೆ ಮೀರಿ ಹರಿದಾಗ ದವಳದೊಳಗೆ ನೀರು ನುಗ್ಗದಂತೆ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಮಾಡಲಾಯಿತು. ದೇವಳದ ಹೆಸರಿನಲ್ಲಿ ಸಾಕಷ್ಟು ಸ್ಥಿರಾಸ್ಥಿಗಳನ್ನು ಕೊಳ್ಳಲಾಯಿತು. ಹೀಗೆ ಪಡೆದ ಭೂಮಿಯಲ್ಲಿ ಕೃಷಿ ಮಾಡಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಯಿತು. ಶ್ರೀ ಸಿದ್ಧಿವಿನಾಯಕ ಸೇವಾಸಂಘದಲ್ಲಿ ಉಳಿದ ಮೊತ್ತದಿಂದ ಈ ಎಲ್ಲಾ ಕಾರ್ಯಗಳನ್ನು ನಡೆಸಲಾಯಿತು.